[go: nahoru, domu]

ವಿಷಯಕ್ಕೆ ಹೋಗು

ಭದ್ರಾ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಭದ್ರಾ ಇಂದ ಪುನರ್ನಿರ್ದೇಶಿತ)
ಭದ್ರಾ ನದಿ
ಉಗಮ ಚಿಕ್ಕಮಗಳೂರು ಜಿಲ್ಲೆ, ಕರ್ನಾಟಕ
ಮೂಲಕ ಹರಿಯುವ ದೇಶಗಳು ದಕ್ಷಿಣ ಭಾರತ

ಭದ್ರಾ ನದಿಯು ದಕ್ಷಿಣ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿ ಕರ್ನಾಟಕ ರಾಜ್ಯದಲ್ಲಿ ಹರಿಯುವ ಪ್ರಮುಖ ನದಿಗಳಲ್ಲೊಂದು. ಭದ್ರಾ ನದಿಯು ಪಶ್ಚಿಮಘಟ್ಟದ ಭದ್ರಾ ನದಿಯು ವರಾಹ ಪರ್ವತದ ತಪ್ಪಲಿನಲ್ಲಿರುವ ಗಂಗಾ ಮೂಲದಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ ಡೆಕ್ಕನ್ ಪ್ರಸ್ಥಭೂಮಿಯ ಮೇಲೆ ಹರಿಯುತ್ತದೆ. ತನ್ನಿತರ ಉಪನದಿಗಳಾದ ಸೋಮವಾಹಿನಿ, ತಡಬೇಹಳ್ಳ ಮತ್ತು ಓಡಿರಾಯನಹಳ್ಳಗಳ ಜೊತೆ ಸೇರಿ ಚಿಕ್ಕಮಗಳೂರು ಜಿಲ್ಲೆಯ ಭದ್ರ ಅಭಯರಣ್ಯದ ಮೂಲಕ ಹರಿಯುತ್ತ ಮುಂದೆ ಶಿವಮೊಗ್ಗ ಜಿಲ್ಲೆಯ ಸಣ್ಣ ಪಟ್ಟಣ 'ಕೂಡ್ಲಿ'ಯಲ್ಲಿ ತುಂಗಾ ನದಿಯೊಂದಿಗೆ ಸೇರಿ ತುಂಗಭದ್ರಾ ನದಿಯಾಗುತ್ತದೆ. ಈ ಭದ್ರಾ ನದಿಗೆ ಲಕ್ಕವಳ್ಳಿಯ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ. ಈ ಅಣ್ಣೆಕಟ್ಟು ಸುಮಾರು ೧೮೬ ಅಡಿ ಇದ್ದು, ೭೧.೫೩೫ ಟಿಎಂಸಿ ನೀರನ್ನು ಸಂಗ್ರಹಿಸಿಡುವ ಸಮರ್ಥ್ಯ ಹೊಂದಿದೆ. ಮುಂದೆ ತುಂಗಭದ್ರೆಯು ಹರಿಯುತ್ತಾ, ಕರ್ನಾಟಕವನ್ನು ದಾಟಿ ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿಯ ಪ್ರಮುಖ ಉಪನದಿಯಾಗಿ ಸೇರಿಕೊಂಡು ಬಂಗಾಳ ಕೊಲ್ಲಿಗೆ ಸೇರುತ್ತದೆ[]. ಭದ್ರಾವತಿ ಪಟ್ಟಣದ ಬಳಿ ಭದ್ರಾ ನದಿಯ ಎಡ ದಂಡೆಯ ಮೇಲೆ ಎರಡು ಪ್ರಮುಖ ಸಾರ್ವಜನಿಕ ಕೈಗಾರಿಕಾ ಘಟಕಗಳಾದ ವಿಶ್ವೇಶ್ವರಯ್ಯ ಕಬ್ಬಿನ ಮತ್ತು ಉಕ್ಕು ಕಾರ್ಖಾನೆ ಮತ್ತು ಮೈಸೂರು ಕಾಗದ ಮತ್ತು ಸಕ್ಕರೆ ಕಾರ್ಖಾನೆ ಸ್ಥಾಪಿಸಲಾಗಿದೆ.

ಭದ್ರಾನದಿಗೆ ತುಂಗಾ ನದಿಯ ಹಿನ್ನೀರು ಹರಿಸುವ ಯೋಜನೆ

[ಬದಲಾಯಿಸಿ]
  • ನರಸಿಂಹರಾಜಪುರ ತಾಲ್ಲೂಕು ಮುತ್ತಿನಕೊಪ್ಪ ಬಳಿ ತುಂಗಾ ಜಲಾಶಯದ ಹಿನ್ನೀರು ಪಂಪ್‌ ಮಾಡಿ ಈ ನಾಲೆಯ ಮೂಲಕ ಭದ್ರಾ ಜಲಾಶಯಕ್ಕೆ ಪ್ರತಿ ವರ್ಷ 17.40 ಟಿಎಂಸಿ ನೀರು ಹರಿಸಲಾಗುತ್ತದೆ. ಈ ನೀರು ಹಾಗೂ ಭದ್ರಾ ಜಲಾಶಯದ 12.57 ಟಿಎಂಸಿ ನೀರು ಸೇರಿ ಒಟ್ಟು 29.97 ಟಿಎಂಸಿ ನೀರನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಬಳಸಿಕೊಳ್ಳಲಾಗುತ್ತದೆ.
  • ಎರಡು ಜಲಾಶಯಗಳ ಮಧ್ಯೆ ಇರುವ 11 ಕಿ.ಮೀ. ಅಂತರದಲ್ಲಿ 8 ಕಿ.ಮೀ ಶಂಕರ ವಲಯ ಹಾಗೂ ಭದ್ರಾ ಅಭಯಾರಣ್ಯಗಳಿಗೆ ಸೇರಿದ ದಟ್ಟ ಕಾನನವಿದೆ. ಈ ಪ್ರದೇಶದಲ್ಲಿ 60 ಮೀಟರ್‌ ಅಗಲದ ನಾಲೆ ನಿರ್ಮಾಣಕ್ಕಾಗಿ 96.91 ಹೆಕ್ಟೇರ್‌ ಅರಣ್ಯ ಬಳಸಿಕೊಳ್ಳಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅನುಮತಿ ನೀಡಿದೆ.
  • 8 ಕಿ.ಮೀ ವ್ಯಾಪ್ತಿಯಲ್ಲಿ ಇರುವ ಸಾಗವಾನಿ, ಬೀಟೆ, ಭರಣಿಗೆ, ಶ್ರೀಗಂಧ, ಶತಾವರಿ, ಕುಂಕುಮ, ಬೈನೆ, ಮಾವು, ಹೆಬ್ಬಲಸು, ನಂದಿ, ನೆಲ್ಲಿ, ಮತ್ತಿ ಸೇರಿ ವಿವಿಧ ಜಾತಿಯ ಒಟ್ಟು 24,650 ಬೃಹತ್‌ ಮರಗಳನ್ನು ಕಡಿಯಬೇಕಿದೆ.. 3,600 ಮರಗಳು ಈಗಾಗಲೇ ನೆಲಕ್ಕುರುಳಿವೆ. ಮರ ತೆರವು ಕಾರ್ಯದ ವೆಚ್ಚಕ್ಕಾಗಿಯೇ ಅರಣ್ಯ ಇಲಾಖೆಗೆ ರೂ.2.5 ಕೋಟಿ ನೀಡಲಾಗಿದೆ.
  • ನಾಲೆ ನಿರ್ಮಾಣಕ್ಕಾಗಿ ನಾಶವಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿ ರಾಜ್ಯ ಸರ್ಕಾರ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಬಳಿಯ ಕಾವಲ್‌ನಲ್ಲಿ 350 ಹೆಕ್ಟೇರ್‌ ಕಂದಾಯ ಭೂಮಿ ನೀಡಿದೆ. ಆ ಜಾಗದಲ್ಲಿ ಹೊಸದಾಗಿ ಅರಣ್ಯ ಬೆಳೆಸಲು ₹31.5 ಕೋಟಿ ಬಿಡುಗಡೆ ಮಾಡಿದೆ.

206.91 ಹೆಕ್ಟೇರ್‌ ಅರಣ್ಯ ಬಳಕೆ

[ಬದಲಾಯಿಸಿ]
  • ಮೊದಲ ಹಂತದಲ್ಲಿ ತುಂಗಾ ಜಲಾಶಯದಿಂದ ಭದ್ರಾ ಜಲಾಶಯದವರೆಗೆ 96.91 ಹೆಕ್ಟೇರ್‌, ಎರಡನೇ ಹಂತದಲ್ಲಿ ಭದ್ರಾ ಜಲಾಶಯದಿಂದ ತರೀಕೆರೆ ತಾಲ್ಲೂಕು ಅಜ್ಜಂಪುರದವರೆಗೆ (53 ಕಿ.ಮೀ.) 110 ಹೆಕ್ಟೇರ್‌ ಅರಣ್ಯ ಬಳಸಿಕೊಳ್ಳಲು ಅನುಮತಿ ಕೋರಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ರಾಜ್ಯ ಜಲ ಸಂಪನ್ಮೂಲ ಇಲಾಖೆ ಪತ್ರ ಬರೆದಿತ್ತು. ಮೊದಲ ಹಂತದ ವ್ಯಾಪ್ತಿಯ ಮರಗಳ ತೆರವಿಗೆ ಈಗ ಅನುಮತಿ ದೊರಕಿದ್ದು, ತೆರವು ಕಾರ್ಯಾಚರಣೆ ಆರಂಭವಾಗಿದೆ. ಆದರೆ, ಎರಡನೇ ಹಂತದ ವ್ಯಾಪ್ತಿಯಲ್ಲಿ ಭದ್ರಾ ಅಭಯಾರಣ್ಯದ ವನ್ಯಜೀವಿ ತಾಣ ಇರುವ ಕಾರಣ ಮರಗಳ ತೆರವಿಗೆ ಅನುಮತಿ ಸಿಕ್ಕಿಲ್ಲ.

ರೂ.12,340 ಕೋಟಿ ವೆಚ್ಚದ ಯೋಜನೆ

[ಬದಲಾಯಿಸಿ]
  • ಕೆ.ಸಿ. ರೆಡ್ಡಿ ಸಮಿತಿ ಶಿಫಾರಸ್ಸಿನಂತೆ ರಾಜ್ಯ ಸರ್ಕಾರ ಯೋಜನೆ ಆರಂಭಕ್ಕೆ 2007–08ನೇ ಸಾಲಿನಲ್ಲಿ ಹಸಿರು ನಿಶಾನೆ ತೋರಿತ್ತು. ವಿಳಂಬದ ಪರಿಣಾಮ ಯೋಜನಾ ವೆಚ್ಚ ರೂ.12,340 ಕೋಟಿಗೆ ತಲುಪಿದೆ. ಈ ಯೋಜನೆ ಮೂಲಕ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆ ವ್ಯಾಪ್ತಿಯ 2.25 ಲಕ್ಷ ಹೆಕ್ಟೇರ್‌ಗೆ ನೀರು ಒದಗಿಸಲಾಗುತ್ತಿದೆ. ಪ್ರತಿ ವರ್ಷ ಜೂನ್‌ 15ರಿಂದ ಅಕ್ಟೋಬರ್‌ 15ರವರೆಗೆ ನಾಲ್ಕು ಸ್ಥಳಗಳಲ್ಲಿ ನೀರು ಪಂಪ್‌ ಮಾಡುವ ಮೂಲಕ ಬರಪೀಡಿತ ಪ್ರದೇಶಗಳಿಗೆ ನೀರು ಹರಿಸಲಾಗುತ್ತದೆ. ‘ಯೋಜನೆ ಅನುಷ್ಠಾನ ವೇಗ ಪಡೆದುಕೊಂಡಿದೆ. ನಾಲೆಗಳು, ಪಂಪ್‌ಹೌಸ್‌ಗಳ ನಿರ್ಮಾಣ ಕಾಮಗಾರಿ ಭರದಿಂದ ಸಾಗಿವೆ. ಮುಂದೆ ಬರುವ ಮಳೆಗಾಲದಲ್ಲೇ ಪ್ರಾಯೋಗಿಕವಾಗಿ ನೀರು ಹರಿಸಲು ಸಿದ್ಧತೆ ಮಾಡಿ ಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಭದ್ರಾ ಮೇಲ್ದಂಡೆ ಅಧೀಕ್ಷಕ ಎಂಜಿನಿಯರ್ ಕೆ.ತಿಪ್ಪೇಸ್ವಾಮಿ.

ಮುಖ್ಯಾಂಶಗಳು

[ಬದಲಾಯಿಸಿ]

ಮುಖ್ಯಾಂಶಗಳು

  • 11 ಕಿ.ಮೀ. ಉದ್ದ, 60 ಮೀಟರ್‌ ಅಗಲ ವಿಸ್ತೀರ್ಣದ ನಾಲೆ
  • ಮರಗಳ ತೆರವುಗೊಳಿಸಲು ₹ 2.5 ಕೋಟಿ ಬಿಡುಗಡೆ
  • 2ನೇ ಹಂತದ 110 ಹೆಕ್ಟೇರ್‌ ಅರಣ್ಯ ತೆರವಿಗೆ ದೊರಕದ ಅನುಮತಿ

[]

ಕರ್ನಾಟಕದ ನದಿಗಳು

ಉಲ್ಲೇಖ

[ಬದಲಾಯಿಸಿ]